ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅನೇಕ ಜನರು ಜ್ವರದ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮನೆಮದ್ದುಗಳ ಮೊರೆ ಹೋಗುತ್ತಾರೆ ಆದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಸಮಸ್ಯೆಯು ಗಂಭೀರವಾಗಬಹುದು, ಕೆಲವರಲ್ಲಿ ರೋಗಲಕ್ಷಣಗಳು ಕಾಲಕ್ರಮೇಣ ಕಡಿಮೆಯಾಗಬಹುದು. ಹಂದಿಜ್ವರದ ಲಕ್ಷಣಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 10: ವಾತಾವರಣ ವೈಪರೀತ್ಯ ಉಂಟಾದಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಪೈಕಿ ಹಂದಿ ಜ್ವರ (Swine Flu) ಪ್ರಕರಣಗಳು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಬೆಂಗಳೂರಿನಲ್ಲಿ ಕೇವಲ H1N1 ಅಲ್ಲದೆ, H3N2 ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಹಂದಿಜ್ವರ ಲಕ್ಷಣಗಳು, ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಬೆಂಗಳೂರಲ್ಲಿ ಮಳೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಭಾರಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿಲ್ಲ, ಆದರೆ H1N1 ಮತ್ತು H3N2 ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಈ ಸಮಸ್ಯೆಯು ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಯಾವುದೇ ವಯಸ್ಸಿನವರ ಮೇಲೂ ಪರಿಣಾಮ ಬೀರಬಹುದು. ಮಕ್ಕಳಿಗೆ ಫ್ಲೂ ಸಂಬಂಧಿತ ಲಸಿಕೆಗಳನ್ನು ನೀಡುವುದರಿಂದ ಅವರಲ್ಲಿ ಗಂಭೀರ ಪ್ರಕರಣಗಳು ಅಷ್ಟಾಗಿ ಕಂಡುಬರುತ್ತಿಲ್ಲ. ವಯಸ್ಕರು ಮತ್ತು ಹಿರಿಯರಲ್ಲಿ ಮಾತ್ರ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ಮೊದಲ ಮೂರು ದಿನಗಳಲ್ಲಿ ಶೀತ, ಒಣ ಕೆಮ್ಮು, ಕೀಲು ನೋವು ಮತ್ತು ಭೇದಿಯಂತಹ ಲಕ್ಷಣಗಳು ಕಂಡುಬರುತ್ತದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಡಾ. ವಿನಯ್ ಹೊಸದುರ್ಗ ವಿವರಿಸಿದ್ದಾರೆ.









Comments
Leave a Comment